ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿಯ ಇತಿಹಾಸ

ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಮುಂಬಯಿ ಇದು ಮೈಸೂರಿನ ಕೆಲವು ತರುಣರು ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದ ಕಂಪನ್ನು ಹೊರನಾಡಿನಲ್ಲಿ ಪಸರಿಸಿ ಅದರ ಸೊಗಡನ್ನು ಕನ್ನಡಿಗರಿಗೆ ಉಣಬಡಿಸುವ ದೃಷ್ಟಿಯಿಂದ ನಿಸ್ವಾರ್ಥವಾಗಿ ದುಡಿದ ಫಲವೇ ಎನ್.ಕೆ.ಇ.ಎಸ್.
ಮುಂಬೈ ಕನ್ನಡಿಗರ ಜ್ಞಾನದಾಹವನ್ನು ಅರಿತು ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಶರ್ಮರವರ ಮುಂದಾಳತ್ವ ಹಾಗೂ ದೃಢ ನಿರ್ಧಾರದ ಫಲದಿಂದ 1926ರ ಮೇ ತಿಂಗಳಿನಲ್ಲಿ ಮೈಸೂರು ಅಸೋಸಿಯೇಶನ್ನಿನ ಸಂಚಾಲಕತ್ವದಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು.


ಶಾಲೆಯು ಇಬ್ಬರು ನುರಿತ ಶಿಕ್ಷಕರು ಹಾಗೂ ಒಬ್ಬ ಸಿಪಾಯಿಯನ್ನೊಳಗೊಂಡು ಆರಂಭವಾದರೂ ಅಸೋಸಿಯೇಶನ್ ಹಣದ ಮುಗ್ಗಟ್ಟಿನಿಂದಾಗಿ 1927 ರಲ್ಲಿ ಶಾಲೆಯನ್ನು ಮುಚ್ಚಿತು. 1937ರಲ್ಲಿ ಅಂದಿನ ಮೈಸೂರು ಮಹಾಸಂಸ್ಥಾನದ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಅಸೋಸಿಯೇಶನ್ನಿಗೆ ಭೇಟಿ ನೀಡಿ ಅಸೋಸಿಯೇಶನ್ ನಿರ್ವಹಿಸುತ್ತಿದ್ದ ಕನ್ನಡ ಸಂಸ್ಕೃತಿ ಹಾಗೂ ಕ್ರೀಡೆಗಳ ಅಭಿವೃದ್ದಿಯನ್ನು ಶ್ಲಾಘಿಸಿ ಈ ಸಂಘಟನಾತ್ಮಕ ಶಕ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲೂ ಉಪಯೋಗಿಸಲು ಸೂಚಿಸಿದರು.


ವಿಶ್ವೇಶ್ವರಯ್ಯನವರು ನೀಡಿದ ಈ ಮಹತ್ತರವಾದ ಸೂಚನೆಯನ್ನು ಅಂದಿನ ವೀಕ್ಲಿ ಕಾಮರ್ಸ್ ಪತ್ರಿಕೆಯ ಸಂಪಾದಕರು ಹಾಗೂ ಬರೆಹಗಾರರಾದ ಶ್ರೀ ಆರ್.ವಿ.ಮೂರ್ತಿ ಮತ್ತು ಅವರ ನಿಕಟವರ್ತಿಗಳಾದ ಶ್ರೀ ಎನ್.ಎನ್.ಹುಬ್ಬಿ, ಶ್ರೀ ಬಿ.ಎಮ್.ಮೂರ್ತಿ, ವಿದ್ವಾನ್ ಮಾಹುಲಿ ಗೋಪಾಲಾಚಾರ್ಯ ಮುಂತಾದವರ ಸಹಾಯದಿಂದ ಈ ಸಮಿತಿಯು ಸಂಘಟನಾತ್ಮಕವಾಗಿ ಸ್ಥಾಪಿಸಲ್ಪಟ್ಟಿತು. ಮುಂಬಯಿಯ ಜನರಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವ ಉದ್ದೇಶದಿಂದ ಜನರಲ್ಲಿ ರಾಷ್ಟ್ರ ಕಟ್ಟುವ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಇದನ್ನು ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಎಂದು ಸರ್ವಾನುಮತದಿಂದ ನಿರ್ದರಿಸಲ್ಪಟ್ಟಿತು. ಅದರಂತೆ 1939ರ ಮೇ ತಿಂಗಳಿನ ಒಂದು ಭಾನುವಾರದಂದು ಎನ್.ಕೆ.ಇ.ಎಸ್ ಜನ್ಮತಾಳಿತು. ವಿದ್ವಾನ್ ಮಾಹುಲಿ ಗೋಪಾಲಾಚಾರ್ಯರು ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡರು. ಶಾಲೆಯ ಹನ್ನೊಂದು ವಿದ್ಯಾರ್ಥಿಗಳ ಮೊದಲ ವರ್ಷವು ಮಾಟುಂಗದ ಕರ್ನಾಟಕ ಸಂಘದ ಒಂದು ಬಾಡಿಗೆ ಕೋಣೆಯಲ್ಲಿ ಆರಂಭಗೊಂಡಿತು. ಎರಡನೆಯ ವರ್ಷ ವಿದ್ಯಾರ್ಥಿಗಳ ಸಂಖ್ಯೆ 17ಕ್ಕೆ ಏರಿದ್ದರಿಂದ ಮತ್ತೆರಡು ಕೋಣೆಗಳನ್ನು ಕಿಂಗ್ನ ಸರ್ಕಲ್‌ನ ಮಹಿಳಾಶ್ರಮದಲ್ಲಿ ಬಾಡಿಗೆಗೆ ತೆಗೆದುಕೊಂಡು ಶಾಲೆಯನ್ನು ನಡೆಸಲಾಯಿತು. ದ್ವಿತೀಯ ಮಹಾಯುದ್ದದ ಸಮಾಪ್ತಿಯ ತರುವಾಯ ಸಾಯನ್‌ನಲ್ಲಿರುವ ಸೈನಿಕ ವಸತಿಗಳಿಂದ ಸೈನಿಕರು ನಿರ್ಮಿಸಿದ ನಂತರ ದಿವಾನ್ ಬಹಾದ್ದೂರ್ ರಾಮಾಸ್ವಾಮಿ ಹಾಗೂ ಶ್ರೀ ಗುಬ್ಬಿಯವರ ಪ್ರಯತ್ನದಿಂದ ಮುಂಬೈ ಮಹಾನಗರ ಪಾಲಿಕೆಯಿಂದ ಸೈನಿಕ ವಸತಿಗಳನ್ನು ಶಾಲೆ ನಡೆಸಲು ಪಡೆಯಲಾಯಿತು.


 1946ರಲ್ಲಿ  ಮುಂಬೈ ಮಹಾಣಗರ ಪಾಲಿಕೆಯು  ಶಿವಡಿ ವಡಾಲದ ರಸ್ತೆ ಸಂಖ್ಯೆ 9ರಲ್ಲಿ  ಆರು ನಿವೇಶನವನ್ನು ಒದಗಿಸಿತು. ಸಂಸ್ಥೆಯ ಹಣಕಾಸಿನ ಕೊರತೆಯನ್ನು ನೀಗಲು ಮಹಿಳಾ ಸದಸ್ಯರಾದ ವೈದೇಹಿ ಚಾರ್ ಹಾಗೂ ಅವರ ಸಂಗಡಿಗರು ವಡಾಲ ಪರಿಸರದ ಮನೆಮನೆಗೆ ತೆರಳಿ ಹಳೆಯ ಪೀಠೋಪಕರಣ, ರದ್ದಿ ಪೇಪರ್ ಗಳನ್ನು ಕಲೆಹಾಕಿ ಅದನ್ನು ಮಾರಿ ಹಣ ಸಂಗ್ರಹಿಸಿದರು. ಮುಂಬಯಿಯ ಪ್ರಸಿದ್ಧ ಕಟ್ಟಡ ಶಿಲ್ಪಿ ಕಲಾಕಾರರಾದ ಶ್ರೀ.ಬಿ.ವಿ. ಎಸ್.ಅಯ್ಯಂಗಾರರು ತಾವೇ ಸ್ವತಃ ಮುಂದೆ ಬಂದು ಶಾಲೆಯ ಭವ್ಯ ಕಟ್ಟಡದ ನಕ್ಷೆಯನ್ನು ನಿರ್ಮಿಸಿಕೊಟ್ಟರು. ಶ್ರೀ.ಆರ್. ಡಿ.ಚಾರ್ ರವರು 50,000ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು. ಅವರ ಪ್ರೋತ್ಸಾಹದ ಫಲವಾಗಿ ಭವ್ಯ ಜ್ಞಾನ ಮಂದಿರದ ಭೂಮಿ ಪೂಜೆಯು ಅಕ್ಟೋಬರ್ 1953ರಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಆರ್.ಡಿ ಚಾರ್ ರವರ ಮುಂದಾಳತ್ವದಲ್ಲಿ ನೆರವೇರಿತು. ಹೊಸ ಕಟ್ಟಡದ ದಕ್ಷಿಣ ವಿಭಾಗವು 14 ಜೂನ್ 1956 ರಂದು ಪೂರ್ಣಗೊಂಡಿತು. ಹೊಸ ಕಟ್ಟಡದಲ್ಲಿ ಜೂನ್ 1957ರಲ್ಲಿ ಮೊದಲನೆಯ ವರ್ಷವು ಆರಂಭಗೊಂಡಿತು. ಅದರಂತೆ 1960ರಲ್ಲಿ ಮೈಸೂರು ಅಸೋಸಿಯೇಶನಿನ ಸದಸ್ಯರ ಸ್ಪೂರ್ತಿಯಿಂದ ವಿಶ್ವೇಶ್ವರ ವಿಂಗ್ ನಿರ್ಮಾಣಗೊಂಡಿತು. ಇಂದು ಅದೇ ವಿಭಾಗದಲ್ಲಿ ಸರ್,ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ರಿಸರ್ಚನ್ನು ಪ್ರಾರಂಭಿಸಿದ್ದು ಇದು ಮುಂಬೈ ವಿಶ್ವವಿದ್ಯಾಲಯದಿಂದ ಅಂಗೀಕರಿಸಲ್ಪಟ್ಟಿದೆ.  2012 ರಲ್ಲಿ M.M.S ನ ಮೊದಲ ವರ್ಷ ದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.

ಶಾಲೆಯು ತನ್ನ ಬೆಳ್ಳಿ ಹಬ್ಬವನ್ನು 1946ರಲ್ಲಿ  ಮೈಸೂರು ಮಹಾರಾಜರಾದ ಶ್ರೀ ಜಯ ಮಹಾರಾಜ ಒಡೆಯರವರ ಉಪಸ್ಥಿತಿಯಲ್ಲಿ ಆಚರಿಸಿಕೊಂಡಿತು. 1989ರಲ್ಲಿ ಶಾಲೆಯು ತನ್ನ ಸುವರ್ಣ ಮಹೋತ್ಸವವನ್ನು ನೆರವೇರಿಸಿತು. ಹಾಗೂ 1998-99ರಲ್ಲಿ ತನ್ನ ವಜ್ರಮಹೋತ್ಸವವನ್ನು ಅತೀ ವಿಜ್ರಂಭಣೆಯಿಂದ ಆಚರಿಸಿಕೊಂಡಿತು. ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘವಾದ ಸೇವೆಯನ್ನು ಸಲ್ಲಿಸಿದ್ದು 2014ರಲ್ಲಿ ತನ್ನ 75ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವವನ್ನು ಆಚರಿಸುವ ಸಿದ್ದತೆಯನ್ನು ನಡೆಸುತ್ತಿದೆ.