ಪ್ರಾಥಮಿಕ ವಿಭಾಗದ ವಾರ್ಷಿಕ ವರದಿ

ಪ್ರಾಥಮಿಕ ವಿಭಾಗದ ವಾರ್ಷಿಕ ವರದಿ 2011-2012

ವಿಲಿಯಂ ಬಟ್ಲರ್ ಯೇಟ್ಸನ ಹೇಳಿಕೆಯಂತೆ ಶಿಕ್ಷಣವೆಂದರೆ ಗಡಿಗೆ ತುಂಬಿಸುವುದಲ್ಲ ಅದಕ್ಕೆ ಬದಲಾಗಿ ದೀಪವನ್ನು ಬೆಳಗಿಸುವುದು.
ಎನ್.ಕೆ.ಇ.ಎಸ್. ಪ್ರಾಥಮಿಕ ಶಾಲೆಯು ಸತತ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಯುಕ್ತವಾದ ಶಿಕ್ಷಣವನ್ನು ಕೊಡುವುದು ಮಾತ್ರವಲ್ಲದೆ ಉತ್ತಮವಾದ ಜ್ಞಾನವನ್ನಿತ್ತು ಅವನನ್ನು ಬುದ್ದಿವಂತನನ್ನಾಗಿಸಿ ಉತ್ತಮ ನಾಗರಿಕನನ್ನಾಗಿಸಲು ಪ್ರಯತ್ನಿಸುತ್ತಿದೆ.
ಉತ್ತಮವಾದ ಆರಂಭವು ಯಾವಾಗಲೂ ಉತ್ತಮವಾಗಿಯೇ ಕೊನೆಗೊಳ್ಳುತ್ತದೆ:
ಶಾಲೆಯ ಶೈಕ್ಷಣಿಕ ವರ್ಷವು ಪಾಲಕರ ಸಭೆಯ ಮುಖಾಂತರ ಆರಂಭಗೊಂಡಿತು. ಇದರಲ್ಲಿ ಶಾಲೆಯ ನಿಯಮಗಳ ಕುರಿತು ಪಾಲಕರಿಗೆ ತಿಳಿ ಹೇಳಲಾಯಿತು.
ಶಾಲೆಯ ಪ್ರಾರಂಭದಲ್ಲಿ ಕಾರ್ಯಕಾರಿ ಸಮಿತಿಯು ಶಿಕ್ಷಕರ ಸಭೆಯನ್ನು ಕರೆದು ಅವರಲ್ಲಿ ಬೋಧನಾ ತಂತ್ರಜ್ಞಾನ ಹಾಗೂ ವಿಧಾನವನ್ನು ಅಳವಡಿಸಿಕೊಂಡು ಬೋಧನೆ ಹಾಗೂ ಕಲಿಕೆಯು ಅತೀ ಉತ್ಸಾಹ  ಜನಕವಾಗುವಂತೆ ಮಾಡಲು ಮಾರ್ಗದರ್ಶಕವನ್ನಿತ್ತರು.
 
ಕಾರ್ಯಕಾರಿ ಸಮಿತಿಯ ಕಾರ್ಯ ವೈಖರಿ:
ಆಧುನಿಕ ಯುಗಕ್ಕೆ ಸೂಕ್ತವಾಗುವಂತೆ ದೃಕ್-ಶ್ರವಣ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ೧ ನೇ ಮತ್ತು ೨ ನೇ ತರಗತಿಗೆ ಧ್ವನಿಶಾಸ್ತ್ರ ಮತ್ತು ಕಥೆ ಹೇಳುವ ತಂತ್ರಜ್ಞಾನವನ್ನು C.D.ಗಳ ಮುಖಾಂತರ ಹಾಗೂ ಮೂರನೇ ಮತ್ತು ನಾಲ್ಕನೇ ತರಗತಿಗೆ ಇ-ಕಲಿಕೆಯನ್ನು ಪ್ರಾರಂಭಿಸಿದೆ. L.C.D ಮೊನಿಟರನ್ನು ಪ್ರತಿಯೊಂದು ತರಗತಿಯಲ್ಲಿ ಅಳವಡಿಸಲಾಗಿದೆ. ಅದೂ ಅಲ್ಲದೆ ಸತತ ಸಮಗ್ರ ಮಾದರಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲೆಯ ಅವಧಿಗೆ ಒಂದು ತಾಸು ಮುನ್ನ ಪರಿಹಾರ ಬೋಧನೆಯನ್ನಿತ್ತು ಅವರ ಗುಣವನ್ನು ಹೆಚ್ಚಿಸಲು ಕಾರ್ಯಕಾರಿ ಸಮಿತಿಯು  ಶ್ರಮಿಸುತ್ತದೆ.
ಕಾರ್ಯಕಾರಿ ಸಮಿತಿಯ ಸಹಕಾರದಿಂದ ಆಂಟಾಪ್ ಹಿಲ್ ಮತ್ತು ಗಣೇಶ ನಗರ ಪರಿಸರದ ವಿದ್ಯಾರ್ಥಿಗಳಿಗಾಗಿ ಬೆಸ್ಟ ಬಸ್ ಸೌಲಭ್ಯವನ್ನು ನೀಡಲಾಗಿದೆ. ಹಾಗೂ ಆರೋಗ್ಯ ಶಿಬಿರವನ್ನು ಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧಾತ್ಮಕ ಮನೋಭಾವನೆಯ ಬೆಳವಣಿಗೆ:
ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಗೆ ತರುವ ಉದ್ದೇಶದಿಂದ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಚಿತ್ರಕಲೆ, ಉತ್ತಮ ಬರಹ, ಕಥೆ ಹೇಳುವುದು, ಬಾಯ್ದರೆ, ಸ್ಮರಣ ಶಕ್ತಿ ಪರೀಕ್ಷೆ, ಕಸದಿಂದ ರಸ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದೂ ಅಲ್ಲದೆ, ನಮ್ಮ ಪ್ರಕಲ್ಪ "ಹೆಣ್ಣು ಮಕ್ಕಳನ್ನು ರಕ್ಷಿಸಿ" ಇದು ಉತ್ತಮವಾಗಿ ಮೂಡಿಬಂದಿತು. ವಲಯ ಮಟ್ಟದಲ್ಲಿ ಜರುಗಿದ ಹಲವಾರು ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ರೀಡೋತ್ಸವದಂದು ಕ್ರೀಡಾ ಚಟುವಟಿಕೆಗಳು ಜರುಗಿತು. ಉದ್ಘಾಟನಾ ಸಮಾರಂಭದಲ್ಲಿ ೧ನೇ ೨ನೇ ಮತ್ತು ೩ನೇ ತರಗತಿ ವಿದ್ಯಾರ್ಥಿಗಳ ಕವಾಯತು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು.  ಬಹುಮಾನ ವಿತರಣೆ ಕಾರ್ಯಕ್ರಮವು ಅದೇ ದಿನ ಸಂಜೆ ಜರುಗಿತು.

ಶ್ರದ್ಧಾ ಭಕ್ತಿಯ ಮನೋಭಾವನೆ:
 ಸ್ವಾತಂತ್ರ್ಯ ದಿನವನ್ನು ಅತ್ಯಂತ ಶ್ರದ್ಧಾ ಭಕ್ತಿಯ ಮನೋಭಾವದಿಂದ ಆಚರಿಸಲಾಯಿತು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬಿಂಬಿಸುವ ಹಾಡಿಗೆ ಎರಡು ನೃತ್ಯವನ್ನು ಪ್ರಸ್ತುತಪಡಿಸಿದರು. ನಮ್ಮ ವಿದ್ಯಾರ್ಥಿಗಳು ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಗಣರಾಜ್ಯ ದಿನ ಜರುಗಿದ ಪ್ರಭಾತ ಫೇರಿಯಲ್ಲಿ ಇಂದಿನ ಸಮಾಜದಲ್ಲಿ ಅತೀ ಚರ್ಚಿತವಾಗುತ್ತಿರುವ ವಿಷಯದ ಕುರಿತು ಭಿತ್ತಿ ಪತ್ರಗಳೊಂದಿಗೆ ಘೋಷಣೆಯನ್ನು ಕೂಗಿದರು.
ಹಬ್ಬಗಳ ಮಹತ್ವವನ್ನು ತಿಳಿಸಿಕೊಡುವುದು:
ವಿದ್ಯಾರ್ಥಿಗಳು ದಹಿ ಹಂಡಿಯಂದು ರಾಧಾ ಕೃಷ್ಣರ ವೇಷಗಳನ್ನು ಹಾಕಿ ಅತೀ ಉತ್ಸಾಹದಿಂದ ಭಾಗವಹಿಸಿದರು. ದೀಪಾವಳಿ ಬೆಳಕಿನ ಹಬ್ಬದ ಸಂದರ್ಭದಲ್ಲಿ ತರಗತಿಗಳನ್ನು ಅಲಂಕರಿಸಿ ಸಿಹಿತಿಂಡಿಗಳನ್ನು ಹಂಚಲಾಯಿತು. ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ತರಗತಿಗಳನ್ನು ಶೃಂಗರಿಸಿ ಕೇಕ್ಗಳನ್ನು ಹಂಚಲಾಯಿತು.
ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು:
ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಶಾಲೆಯು ಉತ್ತಮವಾದ ವೇದಿಕೆಯಾಗಿದೆ. ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಶ್ರೀಮತಿ ವಿನಯ ಶೆಟ್ಟಿಯವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ರಸಪ್ರಶ್ನೆ ಮತ್ತು ಛದ್ಮವೇಷ ಸ್ಪರ್ಧೆಗಳು ಜರುಗಿದವು ಇದಕ್ಕೆ ವಿದ್ಯಾರ್ಥಿಗಳ ಹಾಗೂ ಪಾಲಕರ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ ಮೈದಾನದಲ್ಲಿ ಉತ್ತಮವಾದ ಪ್ರದರ್ಶನವನ್ನಿತ್ತರು.

ಮೋಜು ಮತ್ತು ಆಟ:
ಆಟವಿಲ್ಲದೆ ಕೇವಲ ಪಾಠದಿಂದ ಜಾನ್ ದಡ್ಡ ಹುಡುಗನಾದ ಎಂಬ ಇಂಗ್ಲೀಷ್ ನುಡಿಮುತ್ತಿನಂತೆ ಮನಸ್ಸು ಮತ್ತು ದೇಹವನ್ನು ಉಲ್ಲಾಸವನ್ನಾಗಿಸುವ ದೃಷ್ಟಿಯಿಂದ ಭಿವಂಡಿಯ ಪುಷ್ಕರ್ ಮೇಳಕ್ಕೆ ಶಾಲಾ ಪ್ರವಾಸವನ್ನು ಏರ್ಪಡಿಸಲಾಗಿತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅತೀವ ಸಂತಸಗೊಂಡರು.
ಶಿಕ್ಷಕ ಹಾಗೂ ಪಾಲಕರ ಸಭೆಯು ಕಾಲಕಾಲಕ್ಕೆ ಜರುಗಿತು.  ಇದರಲ್ಲಿ ವಿದ್ಯಾರ್ಥಿಗಳ ಮತ್ತು ಶಾಲೆಯ ಕುರಿತು ಚರ್ಚಿಸಲಾಯಿತು. ಪಾಲಕರು ಶಾಲಾ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಸಂಪೂರ್ಣವಾದ ಸಹಕಾರವನ್ನಿತ್ತರು.

2011-2012ರ ಶೈಕ್ಷಣಿಕ ವರ್ಷವು ಮುಗಿಯುತ್ತ ಬಂದಿದೆ. ನಾವು ಹಾಕಿಕೊಂಡ ಗುರಿಯನ್ನು ಯಶಸ್ವಿಯಾಗಿ ತಲುಪಿದ್ದೇವೆ. ಇದಕ್ಕೆ ಕಾರಣ ಶಾಲಾ ಆಡಳಿತ ಸಮಿತಿ, ಶಿಕ್ಷಕರು, ಶಿಕ್ಷಕೇತರ ವರ್ಗ ಹಾಗೂ ಪಾಲಕರ ಸಹಕಾರದಿಂದೆಂದರೆ ಅತಿಶಯೋಕ್ತಿಯಲ್ಲ. ಈ ಯಶಸ್ಸಿನ ಪ್ರೇರಣೆಯೊಂದಿಗೆ ಇನ್ನು ಮುಂದೆಯೂ ಹತ್ತು ಹಲವು ರಚನಾತ್ಮಕ ಕಾರ್ಯಕ್ರಮಗಳ ಮುಖಾಂತರ ಈ ಯಶಸ್ಸನ್ನು ಇನ್ನು ಮುಂದಿನ ವರ್ಷಗಳಲ್ಲೂ ಮುಂದುವರಿಸಿಕೊಂಡು ಹೋಗುವ ಗುರಿಯನ್ನು ಹೊಂದಿದ್ದೇವೆ.