ಮಾಧ್ಯಮಿಕ ವಿಭಾಗದ ವಾರ್ಷಿಕ ವರದಿ

ಮಾಧ್ಯಮಿಕ ವಿಭಾಗದ ವಾರ್ಷಿಕ ವರದಿ 2011-2012
ಸರ್.ಎಂ.ವಿಶ್ವೇಶ್ವರಯ್ಯ ನವನರ ಮಾತಿನಂತೆ ನಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ಒಂದೇ ಪರಿಹಾರ. ಅದೇ ಶಿಕ್ಷಣ, ಅದಕ್ಕಾಗಿ ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿಯ ಶಾಲೆಯು ಮುಂಬಯಿಯ ಅತೀ ಹಳೆಯದಾದ ಕನ್ನಡ ಶಾಲೆಗಳಲ್ಲಿ ಒಂದಾಗಿದೆ. 1939 ರಂದು ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡುವ ಉದ್ದೇಶದಿಂದ  ಸ್ಥಾಪನೆಯಾಯಿತು.
ನನಗೆ ಶಾಲೆಯ 73 ನೇ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಲು ಸಂತೋಷವಾಗುತ್ತಿದೆ. ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ  ಉನ್ನತ ಶಿಕ್ಷಣವನ್ನು ಪ್ರಾರಂಭಿಸಿದ್ದು , M.M.S ಮುಂಬೈ ವಿಶ್ವವಿದ್ಯಾನಿಲಯದಿಂದ ಅಂಗೀಕೃತವಾಗಿದ್ದು ಇದರ ಮೊದಲನೆ ವರ್ಷದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಯನ್ನು 2012ರ ಏಪ್ರಿಲ್-ಮೇ ತಿಂಗಳಲ್ಲಿ ಬರೆಯಲಿದ್ದಾರೆ. ಅದೂ ಅಲ್ಲದೆ ನಾವು ವಾಣಿಜ್ಯ ವಿಭಾಗದೊಂದಿಗೆ ಮಾಹಿತಿ ತಂತ್ರಜ್ಞಾನವೆನ್ನುವ ಒಂದು ವಿಷಯವನ್ನು ಆರಿಸಿಕೊಂಡು ಕಿರಿಯ ಕಾಲೇಜನ್ನು ಪ್ರಾರಂಭಿಸಿದ್ದೇವೆ. K.Gಯಿಂದ P.Gಯವರೆಗೆ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಶಾಲಾ ಅಮೃತಮಹೋತ್ಸವದ ಸಂದರ್ಭದಲ್ಲಿ ಅಂದರೆ 2014-2015 ರಲ್ಲಿ B.Com ಹಾಗೂ B.MS ನ್ನು ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ. ಎನ್.ಕೆ.ಇ.ಎಸ್ ಶಾಲೆಯು ಎಲ್ಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು , ಶೈಕ್ಷಣಿಕದೊಂದಿಗೆ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಅತೀ ಮುತುವರ್ಜಿಯಿಂದ ಭಾಗವಹಿಸುತ್ತಿದ್ದಾರೆ. ಎಲ್ಲಾ ತರಗತಿಗಳು ಸಂಖ್ಯಾತ್ಮಕವಾಗಿ ರೂಪುಗೊಂಡಿವೆ. 3ನೇ ತರಗತಿಯಿಂದ 12ನೇ ತರಗತಿಯವರೆಗೆ ಎಲ್ಲಾ ತರಗತಿಗಳಲ್ಲಿ ತರಗತಿ ತಂತ್ರಜ್ಞಾನವನ್ನು ಕೊಡುವುದರೊಂದಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೋಧನಾ ಕಲಿಕಾ ಪ್ರಕ್ರಿಯೆಯ ಕಾರ್ಯ ನಿರ್ವಹಿಸುವರು. Teach Next Education India Ltd ಹಾಗೂ I Care Project ನ ಮುಖಾಂತರ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆಯನ್ನು ಏರ್ಪಡಿಸಲಾಗುತ್ತದೆ. ಅದೂ ಅಲ್ಲದೆ ಇನ್‌ಫೋಸಿಸ್ ನ ಸಹಯೋಗದೊಂದಿಗೆ 90ಕಂಪ್ಯೂಟರ್ ಗಳನ್ನೊಳಗೊಂಡ ಮಾಹಿತಿ ತಂತ್ರಜ್ಞಾನದ ಪ್ರಯೋಗಾಲಯವನ್ನು ಪ್ರಾರಂಭಿಸಿದೆ. ಇನ್ಫೋಸಿಸ್ ನ ಶ್ರೀಮತಿ ಸುಧಾ ಮೂರ್ತಿಯವರ ಸಹಾಯ ಮತ್ತು ಸಹಕಾರಕ್ಕೆ ನಾವು ಚಿರಋಣಿಗಳು.

ನಮ್ಮ ಶಾಲಾ ಕಟ್ಟಡವು 6 ದಶಕಗಳಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದು ಅದನ್ನು ದುರಸ್ತಿಗೊಳಿಸಿ ಶಾಲೆಯು ಇನ್ನಷ್ಟು ಸುಸ್ಥಿತಿಯಲ್ಲಿ ಪ್ರಗತಿಯತ್ತ ಸಾಗಲು ಶಾಲಾ ಆಡಳಿತ ಸಮಿತಿಯು ನವೀಕರಣದ ಕಾರ್ಯವನ್ನು ಉತ್ತಮವಾದ ಶಿಕ್ಷಣ ಹಾಗೂ ಶ್ರೇಷ್ಠ ಸೌಲಭ್ಯವನ್ನು ಕೊಡುವ ಉದ್ದೇಶದಿಂದ ಪ್ರಾರಂಭಿಸಿದೆ. ಮುಂಬರುವ ವರ್ಷಗಳಲ್ಲಿ ಪದವಿ ಕಾಲೇಜನ್ನು ಪ್ರಾರಂಭಿಸುವ ಉದ್ದೇಶವನ್ನು ಆಡಳಿತ ಸಮಿತಿಯು ಹೊಂದಿದ್ದು ದಾನಿಗಳ ಹಾಗೂ ಶಾಲಾ ಹಿತೈಷಿಗಳ ಸಹಾಯವನ್ನು ಬಯಸುತ್ತಿದೆ.

ನಮ್ಮ ಚಟುವಟಿಕೆಗಳು ಮತ್ತು ಆಚರಣೆಗಳು:
ಎನ್.ಕೆ.ಇ.ಎಸ್. ಶಾಲೆಯು ಇನ್ ಸ್ಪಾಯರ್ ವಿಜ್ಞಾನ ಪ್ರದರ್ಶನವನ್ನು ಜುಲೈ ತಿಂಗಳಲ್ಲಿ ಭಾರತ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿದ್ದು ದಕ್ಷಿಣ ವಲಯದ 450ಕ್ಕೂ ಅಧಿಕ ಶಾಲೆಗಳು ಭಾಗವಹಿಸಿದ್ದು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಸೃಜನಶೀಲತೆಯನ್ನು ಮೂಡಿಸಲು ಕಾರಣವಾಯಿತು.

ಸಂಖ್ಯಾತ್ಮಕ ತರಗತಿ ತಂತ್ರಜ್ಞಾನವನ್ನು ಆಗಸ್ಟ್ 15ರಂದು ವಿಡಿಯೋ ಕಾನ್ ನಿರ್ದೇಶಕರಾದ ಶ್ರೀ ಸುರೇಶ ಹೆಗ್ಡೆಯವರು ಉದ್ಘಾಟಿಸಿದರು. ಪ್ರತಿಭಾನ್ವಿತ ಯೋಗ್ಯ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನವನ್ನು ವಿತರಿಸಲಾಯಿತು. ಐ ಕೇರ್ ಪ್ರಕಲ್ಪ ದ ಸಂಪೂರ್ಣವಾದ ಪ್ರಾಯೋಜಕತ್ವವವನ್ನು ವಿಡಿಯೋಕಾನ್  ಸಂಸ್ಥೆಯವರು ಕೊಡಮಾಡಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆಗಳು. ನಮ್ಮ ಕನ್ನಡ ಮಾಧ್ಯಮವು ಕಳೆದ 10 ವರ್ಷಗಳಿಂದ ಶೇಕಡಾ 100 ಫಲಿತಾಂಶವನ್ನು ಗಳಿಸುತ್ತಿದೆ. ಅದಲ್ಲದೆ ಆಂಗ್ಲ ಮಾಧ್ಯಮವು 98ರಿಂದ 100 ಶೇಕಡಾ ಫಲಿತಾಂಶವನ್ನು ಗಳಿಸುತ್ತಿದೆ.
ದಹಿಹಂಡಿ ಹಾಗೂ ಗರ್ಬಾ ನೃತ್ಯವನ್ನು ಶಾಲೆಯಲ್ಲಿ ಆಯೋಜಿಲಾಗಿದ್ದು ವಿದ್ಯಾರ್ಥಿಗಳು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅದರಂತೆ ಶಾಲೆಯಲ್ಲಿ ಹಲವು ಹಬ್ಬಗಳನ್ನು ಅತ್ಯಂತ ಉತ್ಸಾಹ, ಸಡಗರ, ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ವಾರ್ಷಿಕೋತ್ಸವವನ್ನು  13 ಜನವರಿ 2012 ರಂದು ಆಚರಿಸಲಾಯಿತು.  ಶ್ರೀ ಕಪಿಲ್ ಪಾಟೀಲರು ಮುಖ್ಯ ಅತಿಥಿಗಳಾಗಿದ್ದರು. ಹಾಗೂ ಶಾಲಾ ಹಳೆಯ ವಿದ್ಯಾರ್ಥಿ ಶ್ರೀ ರತ್ನಾಕರ ಶೆಟ್ಟಿಯವರು ಗೌರವ ಅತಿಥಿಗಳಾಗಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಾಗೂ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾರಿತೋಷಕವನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಹಾಗೂ ಕಿರಿಯ ಕಾಲೇಜಿನ ವಿದ್ಯಾರ್ಥಿಗಳು ಸಾದರ ಪಡಿಸಿದ ಮನೋರಂಜನೆ ಕಾರ್ಯಕ್ರಮಗಳು ಅತಿಥಿಗಳು ಹಾಗೂ ಪಾಲಕರ ಮೆಚ್ಚುಗೆಗೆ ಪಾತ್ರವಾಯಿತು.
ನಮ್ಮ ಸಹ ಪಠ್ಯ ಚಟುವಟಿಕೆಗಳು:
ಸಹಪಠ್ಯ ಚಟುವಟಿಕೆಗಳು ಶಿಕ್ಷಣದ ಒಂದು ಅಂಗವಾಗಿದೆ. ವಿದ್ಯಾರ್ಥಿಗಳಿಗೆ ಹಲಾವರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಕಂಠಪಾಠ ಸ್ಪರ್ಧೆ, ಕಥೆ ಹೇಳುವ ಸ್ಪರ್ಧೆ, ಸ್ಮರಣ ಶಕ್ತಿ, ಶ್ಲೋಕ, ಬುದ್ದಿಮತ್ತೆ, ಛದ್ಮವೇಷ, ಏಕಪಾತ್ರಾಭಿನಯ, ಕಸದಿಂದ ರಸ, ಸಂಗೀತ ಹಾಗೂ ರಸಪ್ರಶ್ನೆಯನ್ನು ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ ಏರ್ಪಡಿಸಿದ್ದು  ಅದರೊಂದಿಗೆ ಚರ್ಚಾ ಸ್ಪರ್ಧೆ, ಭಾಷಣ, ಪ್ರಬಂಧ, ಹಾಗೂ ಮೆಹಂದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಶಾಲಾ ಕಾರ್ಯಕಾರಿ ಸಮಿತಿಯು ಶಾಲೆಯ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಕನ್ನಡ ಕಲಾಕೇಂದ್ರ ಮುಂಬಯಿ, ಮೈಸೂರು ಅಸೋಸಿಯೇಶನ್ ಮುಂಬಯಿ ಹಾಗೂ ಬೆಂಗಳೂರಿನ ನಾಟಕ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ನೃತ್ಯ ಹಾಗೂ ನಾಟಕದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.